
Created on: 11/14/2025
ಸುಸ್ಥಿರ ಕೃಷಿ ಎಂಬುದು ಭವಿಷ್ಯದ ತಲೆಮಾರಿಗೆ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಹಾನಿಗೊಳಿಸದೇ, ಪ್ರಪಂಚದ ಅಗತ್ಯಗಳನ್ನು ಪೂರೈಸುವದನ್ನು ಉದ್ದೇಶಿಸುತ್ತದೆ. ಇದು ಪರಿಸರದ ಆರೋಗ್ಯ, ಆರ್ಥಿಕ ಲಾಭದಾಯಕತೆ ಮತ್ತು ಸಾಮಾಜಿಕ ಸಮತೋಲನವನ್ನು ಒಟ್ಟುಗೂಡಿಸುತ್ತದೆ. ಸುಸ್ಥಿರ ವಿಧಾನಗಳನ್ನು ಅಳವಡಿಸುವ ಮೂಲಕ, ರೈತರು ನೈಸರ್ಗಿಕ ಸಂಪತ್ತುಗಳನ್ನು ರಕ್ಷಿಸಬಹುದು, ಮಣ್ಣಿನ ಸರ್ಫಲತೆಯನ್ನು ಹೆಚ್ಚಿಸಬಹುದು ಮತ್ತು ದೀರ್ಘಕಾಲೀನ ಉತ್ಪಾದಕತೆಯನ್ನು ಖಚಿತಪಡಿಸಬಹುದು.
ಸತತವಾಗಿ ಒಂದೇ ಬೆಳೆಯನ್ನು ಬೆಳೆಸುವದರಲ್ಲಿ ರೈತರಿಗೆ ಹಾನಿಯೇ ಹೊರತು ಲಾಭವು ತುಂಬಾ ಕಷ್ಟದಾಯಕವಾಗುವದು ನಮ್ಮ ಪೂರ್ವಜರು ಒಂದೇ ಋತುವಿನಲ್ಲಿ ಒಂದೇ ಎಕರೆಯಲ್ಲಿ ಸರಿ ಸುಮಾರು ೩ರಿಂದ ೪ ಬೆಳೆಗಳನ್ನು(ಅಕ್ಕಡಿ ಸಾಲು ಪದ್ದತಿಯಲ್ಲಿ) ತೆಗೆಯುವ ಪದ್ದತಿಯನ್ನ ನಾವು ಕಂಡಿದ್ದೇವೆ ಮತ್ತು ಅದರ ಲಾಭವನ್ನು ತಿಳಿದಿದ್ದೇವೆ. ಅದೇ ಮಾದರಿಯಲ್ಲಿ ರೈತರು ತಮ್ಮ ಒಂದು ಬೆಳೆಯಲ್ಲಿ ಇನ್ನಿತರ ಬೆಳೆಗಳನ್ನು ಮಿಶ್ರಣ ಮಾಡುವದರ ಜೊತೆಗೆ ಮಣ್ಣಿಗೂ ಜೀವ ನೀಡಿದಂತಾಗುವದು. ಈ ಪದ್ಧತಿಯು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಕೀಟ ಮತ್ತು ರೋಗಗಳ ಶೇಖರಣೆಯನ್ನು ಕಡಿಮೆ ಮಾಡುತ್ತದೆ ಮತ್ತು ರಾಸಾಯನಿಕ ಗೊಬ್ಬರಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಧಾನ್ಯಗಳೊಂದಿಗೆ ದ್ವಿದಳ ಧಾನ್ಯಗಳನ್ನು ತಿರುಗಿಸುವುದರಿಂದ ಮಣ್ಣಿನಲ್ಲಿ ಸಾರಜನಕವನ್ನು ನೈಸರ್ಗಿಕವಾಗಿ ಮರುಪೂರಣಗೊಳಿಸುತ್ತದೆ.

ಮಣ್ಣೇ ಜೀವನಾಧಾರ ಎನ್ನುವದು ರೈತರಿಗೆ ಮಾತ್ರ ಗೊತ್ತು, ಇಂದಿನ ದಿನಗಳಲ್ಲಿ ಒಂದೇ ರೀತಿಯ ಬೆಳೆಗಳನ್ನು ಬೆಳೆದು ಮಣ್ಣಿನ ರೂಪವನ್ನೇ ನಾವು ನಮ್ಮ ಕೈಯ್ಯಾರೆ ಹಾಳು ಮಾಡುತ್ತಿದ್ದೇವೆ. ಆಳವಾದ ಉಳುಮೆ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ನಾಶಮಾಡುವದಲ್ಲದೆ ಮಣ್ಣನು ಬೇರೆ ರೀತಿಯಲ್ಲಿ ರೂಪಾಂತರಣ ಮಾಡುತ್ತದೆ. ಮತ್ತು ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣವೂ ತಗ್ಗಿಹೋಗುತ್ತಿದೆ. ಆದ್ದರಿಂದ ಬರಿ ಕೀಟ ರಕ್ಷಣೆ, ಬೆಳೆಯ ರೋಗದ ಕಡೆ ಗಮನಹರಿಸುವ ಬದಲು ಮಣ್ಣಿನ ಕಡೆ ಗಮನ ಹರಿಸುವದು ತುಂಬಾ ಮಹತ್ವದಾಗಿದೆ.
ಪ್ರಸ್ತುತ ದಿನಗಳಲ್ಲಿ ರಾಸಾಯನಿಕ ಬಳಕೆಯಿಲ್ಲದೆ ಕೃಷಿಯೇ ಇಲ್ಲದಂತಾಗಿದೆ ಹಾಗಾಗಿ ಒಮ್ಮೆಲೇ ರಾಸಾಯನಿಕ ಬಳಕೆ ನಿಲ್ಲಿಸುವದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಕಷ್ಟಕರವಾಗಬಹುದು ಆದರೆ ರಾಸಾಯನಿಕ ಬಳಕೆಯ ಜೊತೆಗೆ ನಮ್ಮ ಪೂರ್ವಜರು ಚಾಲ್ತಿಯಲ್ಲಿಟ್ಟಿದ್ದ ಕೆಲವು ಪದ್ದತಿಗಳನ್ನು ಅಳವಡಿಸಿಕೊಡರೆ ಸ್ವಲ್ಪ ಮಟ್ಟಿಗೆ ಖರ್ಚನ್ನು ಕಡಿಮೆ ಮಾಡಬಹುದು, ಅದು ಹೇಗೆ ಏನಂದ್ರೆ ಮೇಲೆ ಹೇಳಿದ ಅಕ್ಕಡಿ ಸಾಲು ಪದ್ಧತಿ ಬಹುತೇಕ ಮಟ್ಟಿಗೆ ಕೀಟ ಹಾವಳಿ ಮತ್ತು ರೋಗ ಹಾವಳಿ ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗವುದು. ಉದಾ:ನೈಸರ್ಗಿಕ ಪರಭಕ್ಷಕಗಳನ್ನು ಪರಿಚಯಿಸುವುದು,(ಟ್ರೈಕೋಗ್ರಾಮ) ಕೀಟ-ನಿರೋಧಕ ಬೆಳೆ ಪ್ರಭೇದಗಳನ್ನು ಬಳಸುವುದು ಮತ್ತು ನೈಸರ್ಗಿಕ ಸಂಪನ್ಯೂಲಗಳನ್ನು ಬಳಸಿಕೊಂಡು ಬೆಳೆ ರಕ್ಷಣಾ ವಿಧಾನಗಳನ್ನು ಅಳವಡಿಕೊಳ್ಳುವದು.
ಜಮೀನಿನ ಸುತ್ತಲೂ ನಮ್ಮ ಪೂರ್ವಜರು ಒಂದಿಲ್ಲ ಒಂದು ರೀತಿಯ ಮರಗಳನ್ನು ಬೆಳೆಸಿದ್ದರು ಆದ್ರೆ ಇಂದಿನ ದಿನಗಳಲ್ಲಿ ನಮಗೆ ಅವು ಕಾಣದಂತಾಗಿವೆ, ಬದುಗಳ ಮೇಲೆ ಕೆಲವು ಸ್ಥಳೀಯ ಮರಗಳನ್ನು ಬೆಳೆಸಿದಲ್ಲಿ ಹಾನಿಯಂತೂ ಇಲ್ಲ ಬದಲಾಗಿ ಮುಂದಿನ ದಿನಗಳಲ್ಲಿ ಅವು ರೈತರಿಗೆ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಆದ್ರೆ ನಾವು ಮರಗಳನ್ನು ಬೆಳೆಸುವಾಗ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಬೆಳೆಸುವದರಿಂದ ನೆರಳು ಬೆಳೆಗೆ ಹಾನಿ ಮಾಡುವದಿಲ್ಲ 1)ಹಸಿರೆಲೆ ಗೊಬ್ಬರವನ್ನು ಒದಗಿಸುತ್ತವೆ 2)ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಸಹಾಯ 3)ಮರಮುಟ್ಟು ಬಳಕೆಗೆ ಉಪಯೋಗ 4)ಹಣ್ಣಿನ ಮರಗಳಿಂದ ಲಾಭ ಪಡೆಯಬಹುದು.
ಇಂದಿನ ದಿನಗಳಲ್ಲಿ ಸಾವಯವ ಎನ್ನುವದು ಕನ್ನಡಿಯೊಳಗಿನ ಗಂಟಾಗಿ ಕಾಣುತ್ತಿದೆ ಆ ಗಂಟನ್ನು ಬಿಡಿಸಲು ಸಾಧ್ಯವಾಗದ ಮಾತಾಗಿ ಪರಿವರ್ತನೆ ಕಂಡಿದೆ. ರೈತರು ಒಮ್ಮೆಲೇ ಸಾವಯವ ಕೃಷಿ ಎಂದಾಕ್ಷಣ ಅದೇನು ಕಬ್ಬಿಣದ ಕಡಲೆ ಅನ್ನುವ ಹಾಗಿದೆ, ಬದಲಾಗಿ ಅದು ಸುಲಭ ಮತ್ತು ಸಂರಕ್ಷಣೆಯ ಮಾರ್ಗ, ನಿಧಾನವಾಗಿ ಒಂದೊಂದೇ ಸಾವಯವ ಪದ್ದತಿಗಳನ್ನು ಅಳವಡಿಕೊಂಡಲ್ಲಿ ಉಪಯೋಗ ಉದಾಹರಣೆಗೆ: ಜೀವಾಮೃತ ತಯಾರಿಕೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆಯಂತಹ ಕೆಲ ಸಣ್ಣ ಸಣ್ಣ ವಿಧಾನಗಳನ್ನು ಅಳವಡಿಕೊಂಡು ತಮ್ಮ ಜಮೀನಿನ ಮಣ್ಣನ್ನು ಫಲವತ್ತತೆ ಮಾಡುವದರ ಜೊತ್ಗೆ ಅತಿಯಾದ ಖರ್ಚನ್ನು ತಗ್ಗಿಸಬಹುದು.
ಕೃಷಿಯಲ್ಲಿ ನೀರಿನ ನಿರ್ವಹಣೆ ಮತ್ತು ಸಂರಕ್ಷಣೆ ಬಹಳ ಮುಖ್ಯವಾದ ಅಂಶ ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ನೀರನ್ನು ಪರಿಣಾಮಕಾರಿಯಾಗಿ ಬೆಳೆ ಬೆಳೆಯಲು. ಕನಿಷ್ಠ ಉಳುಮೆ ಮಾಡುವುದು ಮತ್ತು ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಸಾವಯವ ಪದಾರ್ಥಗಳನ್ನು ಸೇರಿಸುವ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರನ್ನು ಸಂರಕ್ಷಿಸಬಹುದು. ಕೃಷಿ ಹೊಂಡಗಳು, ಬದು ನಿರ್ಮಾಣ ಮತ್ತು ಮಳೆನೀರು ಕೊಯ್ಲು ರಚನೆಗಳು ಮಳೆಯನ್ನು ಸಂಗ್ರಹಿಸಲು ಮತ್ತು ಅಂತರ್ಜಲವನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತವೆ. ಹನಿ, ಸ್ಪ್ರಿಂಕ್ಲರ್ ಮತ್ತು ಸೂಕ್ಷ್ಮ ನೀರಾವರಿಯಂತಹ ನವೀನ ರೀತಿಯ ನೀರಾವರಿ ವ್ಯವಸ್ಥೆಗಳು ನೀರನ್ನು ನೇರವಾಗಿ ಸಸ್ಯದ ಬೇರುಗಳಿಗೆ ತಲುಪಿಸುತ್ತವೆ ಮತ್ತು ಗಮನಾರ್ಹ ಪ್ರಮಾಣದ ನೀರನ್ನು ಉಳಿಸುತ್ತವೆ. ಸರಿಯಾದ ಬೆಳೆ ಆಯ್ಕೆ, ಬೆಳೆ ಬದಲಾವಣೆ ಮತ್ತು ಅವಶ್ಯಕವಿರುವ ಬೆಳವಣಿಗೆಯ ಹಂತಗಳಲ್ಲಿ ಮಾತ್ರ ನೀರನ್ನು ಪೂರೈಸುವುದು ನೀರಿನ ಬಳಕೆಯ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಕೃಷಿಯನ್ನು ಹೆಚ್ಚು ಸುಸ್ಥಿರವಾಗಿಸಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ಹೊಲದ ಒಡ್ಡನ್ನು ರಕ್ಷಿಸುತ್ತವೆ.
ಕೃಷಿಯಲ್ಲಿ ಜಾನುವಾರುಗಳ ಪಾತ್ರ ಎಷ್ಟು ಮಹತ್ವದು ಎಂದು ರೈತರಿಯೇ ಹೇಳಬೇಕಿಲ್ಲ ಯಾಕಂದ್ರೆ ಕೃಷಿಗೆ ಮೂಲ ತಳಹದಿಯೇ ಜಾನುವಾರುಗಳು, ಉಪಯೋಗವಾಗದ ಸಸ್ಯದ ಉಳಿಕೆ ತಿಂದು ಕೃಷಿಗೆ ಬೇಕಾಗುವ ಮಹತ್ವ ಅಂಶಗಳನ್ನ ಜಾನುವಾರುಗಳು ನೀಡುತ್ತವೆ, ಅದಲ್ಲದೆ ಅವುಗಳಿಂದ ಲಾಭವೇ ಹೊರತು ನಷ್ಟವಂತೂ ಇಲ್ಲವೇ ಇಲ್ಲ. ಆದ್ರೆ ಪ್ರಸ್ತುತ ದಿನಗಳಲ್ಲಿ ಗೊಬ್ಬರದ ನಿರ್ವಹಣೆಯನ್ನು ನಾವು ಕಡೆಗಣಿದಿದ್ದೇವೆ, ಕೇವಲ ರಾಸಾಯನಿಕ ಗೊಬ್ಬರ ಮಾತ್ರವೇ ಬೆಳೆಗೆ ಶಕ್ತಿ ಎಂದು ತಿಳಿದಿದ್ದೇವೆ, ಅದು ಎಷ್ಟು ಸತ್ಯವೋ ಅಷ್ಟೇ ಮಿಥ್ಯ. ಒಟ್ಟಿನಲ್ಲಿ ಕೃಷಿಯಲ್ಲಿ ಜಾನುವಾರುಗಳ ಬಳಕೆ ಇಲ್ಲದಾದಲ್ಲಿ ಮಣ್ಣು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.
ಕೃಷಿಗೆ ಉಚಿತವಾಗಿ ಸದಾ ಸೇವೆ ನೀಡುವವರೆಂದರೆ ಅದು ಕೇವಲ ಸೂರ್ಯ ಮಾತ್ರ ಹಾಗಾಗಿ ಇಂದಿನ ಆಧುನಿಕ ದಿನಗಳಲ್ಲಿ ಸೌರಚಲಿತ ಯಂತ್ರಗಳನ್ನು ರೈತರು ಅಳವಡಿಕೊಂಡು ಬಹುತೇಕ ಮಟ್ಟದ ಖರ್ಚನ್ನು ತಗ್ಗಿಸಬಹುದು, ಎಲ್ಲೆಲ್ಲಿ ವಿದ್ಯುತ ಅವಶ್ಯಕತೆ ಇದೆಯೋ ಅಲ್ಲಿ ಸೌರಶಕ್ತಿ ಬಳಸಿಕೊಂಡು ತಮ್ಮ ಕಾರ್ಯ ಕೈಗೊಳ್ಳಬಹುದು
ಮಣ್ಣಿನ ಫಲವತ್ತತೆ ಮತ್ತು ರಚನೆಯಲ್ಲಿ ಸುಧಾರಣೆ ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಸುಧಾರಣೆ ಹವಾಮಾನ ಬದಲಾವಣೆಗೆ ಹೆಚ್ಚಿದ ಸ್ಥಿತಿಸ್ಥಾಪಕತ್ವ ರೈತರಿಗೆ ದೀರ್ಘಕಾಲೀನ ಆರ್ಥಿಕ ಸ್ಥಿರತೆ
ಜಗದ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದರ ಜೊತೆಗೆ ಜಾಗತಿಕ ಆಹಾರ ಭದ್ರತೆಯ ಹೊಣೆ ಕೇವಲ ರೈತನ ಮೇಲೆ ಮಾತ್ರ ಇದೆ ಆದ್ದರಿಂದ ನಮ್ಮೆಲರಿಗೂ ಅನ್ನ ನೀಡುವ ಅನ್ನದಾತ ಜಗದ ಜೀವಿಗಳಿಗೆ ಜೀವನ ನೀಡಲು ಸುಸ್ಥಿರ ಕೃಷಿ ಮಾಡುವ ಅಗತ್ಯ ಇದೆ. ನಮ್ಮ ಪೂರ್ವಜರ ಜ್ಞಾನವನ್ನು ಆಧುನಿಕ ನವೀನತೆಯೊಂದಿಗೆ ಬೆಸೆಯುವ ಮೂಲಕ, ರೈತ ಜನರು ಮತ್ತು ಪರಿಸರ ಎರಡನ್ನೂ ಪೋಷಿಸುವ ಸ್ಥಿತಿಸ್ಥಾಪಕ ವ್ಯವಸ್ಥೆಗಳನ್ನು ರಚಿಸಬಹುದು. ಕೃಷಿಯ ಭವಿಷ್ಯವು ಉತ್ಪಾದಕತೆಯನ್ನು ಸುಸ್ಥಿರತೆಯೊಂದಿಗೆ ಸಮತೋಲನಗೊಳಿಸುವ ಅಭ್ಯಾಸಗಳಲ್ಲಿದೆ,